ಪ್ರೀತಿ

ನಿನ್ನ ಮೂಗುತಿ ಮಿಂಚಲ್ಲಿ ನನ್ನನಾ ಕಂಡಾಗ
ಭಯವೆಂಬ ವಿಷಬೀಜ ವಿಧಿ ಭಿತ್ತಿದಾಗ,
ನನ್ನ ಎದೆ ಹಾಳೆಯಲಿ ನಿನ್ನ ಋಜು ಜರಿದಾಗ
ಲೇಖನಿಯ ನೀಲಿ ಖಾಲಿಯಾಯ್ತಾಗ ||೧||

ಮೊದಲ ಸಲ ನೀ ನನ್ನ ಎದಿರು ಬಂದಾಗ
ಮನಸೆಂಬ ಕೋಗಿಲೆ ಬಾಯ್ಕಟ್ಟಿತಾಗ,
ಮೌನದಾ ಗೀತೆಯಾ ನಾ ಹಾಡಿದಾಗ
ನೀ ಕೇಳದಿದ್ದಕ್ಕೆ, ಪರಿತಾಪ ಈಗ ||೨||

ಹೃದಯದಾ ಮಾತಿಗೆ ಧ್ವನಿಯಿಲ್ಲ ಗೆಳತಿ
ಕಣ್ಣಿನಾ ಅಂಚಲ್ಲಿ ನೋಡು ನನ್ ಪ್ರೀತಿ,
ಅನುರಾಗ ಬಳಸಿ ನೀ ಬಾರೆ ಒಡತಿ
ಬಿಳಿಹಾಳೆ ಬಾಳಲ್ಲಿ ನೀನಾಗು ನನ್ನ ಸತಿ ||೩||

ಕಾಮದಲಿ ಬೆರೆತಾಗಿ, ಪ್ರೇಮದಲಿ ಒಂದಾಗಿ
ಜೀವದಲಿ ಕಲೆತಾಗಿ, ಬಾಳಿನಲಿ ಒಂದಾಗಿ,
ಓ ನನ್ನ ಗೆಳತಿ, ನಿನ್ನನ್ನು ಹೊರತಾಗಿ
ಆಗುವುದು ಇನ್ನು, ನನ್ ಜೀವ ಬರಿದಾಗಿ ||೪||

-ಕಾಮಿ

ಎರಡಾಣೆ ಸತ್ಯ

ಆರಾಣೆ ಪರ್ಪಂಚದಾಗೆ ಮೂರಾಣೆ ಜೀವನ
ಎಂಟಾಣೆ ಕನಸ್ನಾಗೆ ನಾಕಾಣೆ ಬಣ್ಣ
ಎರಡಾಣೆ ಸತ್ಯ ನೋಡೋ ಪ್ರಯತ್ನ
ಎರಡಾಣೆ ಸತ್ಯ ನೋಡೋ ಪ್ರಯತ್ನ… ||ಪ||

ಜೀವಂದ ಊರಲ್ಲಿ ಎಷ್ಟೊಂದು ಜೀವನ
ನನ್ ಜೀವನ ಎಲ್ಲೈತೋ ಯಾರಿಗೊತ್ತಣ್ಣ
ಅವರ್ದೊಂದು ಆರಾಣೆ ಇವರ್ದೊಂದು ಮೂರಾಣೆ
ಅಲ್ಲೊಂದು ಎಂಟಾಣೆ ಇಲ್ಲೊಂದು ನಾಕಾಣೆ ||೧||

ಕಂಡವ್ರ ಎಂಟಾಣೆ ಕಣ್ಣಲ್ಲಿ ನಾನು
ನಾಕಾಣೆ ನನ್ನನ್ನ ನಾ ಕಂಡು-ಕೊಂಡು
ಆರಾಣೆಗ್ ಎಗರಿ, ಮೂರಾಣೆಗ್ ಮುದುರಿ
ಎರಡಾಣೆ ಸತ್ಯಾವ ನಾ ಅರಿತು-ಕೊಂಡು ||೨||

ಅವರಿವರ ಜೀವನ ನಾ ಬದುಕಿ ಬದುಕಿ
ನನ್ ಜೀವನ ಯಾವ್ದಂತ ನಾ ಹುಡುಕಿ ಹುಡುಕಿ
ಬೇಸತ್ತು ಬೆವರಿಳಿದು ಕಳೆದೋಗಿ-ಇತ್ತು
ಎರಡಾಣೆ ನನ್ ಜೀವನ ಸುಮ್ನೆ ಮಲಗಿತ್ತು ||೩||

ನನ್ ಜೀವನಾ ನಾ ಬದುಕಿ ನಾ ಸಾಯಬೇಕು
ಬೆರವ್ರ ಮಾತೆಲ್ಲ ನನಗ್ಯಾಕೆ ಬೇಕು
ಯಾರದ್ದೋ ಎಂಟಾಣೆ ಆರಾಣೆಗಿಂತ
ಎರಡಾಣೆ ‘ನಾನು’ ನಾನಾಗಬೇಕು ||೪||

ಬಿಕನಾಸಿ ಬದುಕಲ್ಲಿ ಎರಡಾಣೆ ಸತ್ಯ
ಕಂಡವ್ರ ಎಂಟಾಣೆ ಯಾವಾಗಲು ಮಿಥ್ಯ!
ಎರಡಾಣೆ ಸತ್ಯ ನೋಡೋ ಪ್ರಯತ್ನ
ಎರಡಾಣೆ ಸತ್ಯ ನೋಡೋ ಪ್ರಯತ್ನ… ||೫||

-ಕಾಮಿ

ಮಳೆ

ಬಸಿರಾದ ಆಕಾಶ ಕಾರ್ಮೋಡ ಗರ್ಭದಲಿ
ತುಂಬೈತೆ ಬಯಕೆಗಳು ಮನದ ತೊಟ್ಟಿಲಲಿ
ತಂಪನೆಯ ಗಾಳಿಯಲಿ ಬಿಸಿಯಾದ ಉಸಿರಲ್ಲಿ
ಬಸಿರಾಚೆ ಬಂದಾಗ ಮಳೆಯು ಮಡಿಲಲ್ಲಿ ||೧||

ಹಸಿಮಣ್ಣ ವಾಸನೆಯು ತನುವ ತೋಯುತಲಿರಲು
ಹೊಸಹೆಣ್ಣ ಮನವಿರುವ ನೂರೆಂಟು ಬಯಕೆಗಳು
ದೂರದಾ ಊರಿನೆಡೆ ಕಣ್ಣುಗಳು ನೆಟ್ಟಿರಲು
ಅನಂತದಾ ಬಾಗಿಲನು ಮಳೆಯು ಮುಚ್ಚಿರಲು ||೨||

ಭೂತದಲಿ ಕಳೆದೋಗಿ ಭವಿತವ್ಯ ಮಂಜಾಗಿ
ಹನಿಗಳಾ ಪರದೆಯಲಿ ಮನವು ಮರೆಯಾಗಿ,
ಕಳುವಾಗು ಮನಸೇ, ಬರಿದಾಗು ಕನಸೇ
ಹನಿಗಳಲಿ ಒಂದಾಗು ಜಗತಿನಾ ಕೂಸೇ ||೩||

ಮನಸಿನಾ ಕತ್ತಲೆಯ ಮಳೆಯು ತೊಳೆದಿರಲು
ಸುತ್ತಲಿನ ಪರಪಂಚ ಕಾಲವಾಗಿರಲು,
ಶಬ್ದಗಳು ಭತ್ತಿರಲು, ನಿಶಭ್ದ ಭಿತ್ತಿರಲು
ಮನಸಿನಲಿ ಓಂಕಾರ ಹನಿಯಾಗಿ ಜಿನುಗಿರಲು ||೪||

ನಿಂತಾಗ ಹನಿಗಳು ನಾ ಬಂದೆ ಪ್ರಸ್ತುತಕೆ
ಮನದಲ್ಲಿ ಸುರಿದೈತೆ ಮಳೆ ಸದ್ದಿಲ್ಲದಂಗೆ…

-ಕಾಮಿ

ಮಲಗು ಮನಸೇ!

ಮನಸ್ಸು ಮಲಗಿದೆ ಗದ್ದಲಿಸದಿರು…

ಊರೆಲ್ಲ ಓಡಾಡಿ, ಇದ್ದಲ್ಲೆ ಎಗರಾಡಿ
ಹೊಡೆದಾಡಿ ಬಡಿದಾಡಿ, ಕಿತ್ತಾಡಿ ಚೀರಾಡಿ
ತನ್ನಿಂದ್ಲೇ ಎಲ್ಲಾ, ಎಂಬಂತೆ ಹಾರಾಡಿ
ತಾನೇನು ಇಲ್ಲ, ಎಂದಿಂದು ಅರಿವಾಗಿ
ಕಡೆಗೊಮ್ಮೆ ಮಲಗೈತೆ ಸುಖನಿದ್ದೆ ಸೊಂಪಾಗಿ ||

ಮಲಗೈತೆ ನೋಡಿಲ್ಲಿ ಈ ನನ್ನ ಮನಸು;
ಶಿವನಲ್ಲಿ ಒಂದಾಗಿ, ಆಗೈತೆ ಕೂಸು!

ಸ್ಥಿರದಲ್ಲಿ ಮಲಗಿಲ್ಲಿ ಓ ನನ್ನ ಮನಸೇ
ಚರದಲ್ಲಿ ಹರಿದಾಡಿ ಸುಸ್ತಾಗುವೇಕೆ?
ಭರದಲ್ಲಿ ಅವಸರದ ಈ ಓಟವೇಕೆ?
ಸ್ಥಿರದಲ್ಲಿ ಚರಿತೆ, ಚರದಲ್ಲಿ ಕೊರತೆ
ಪರಮಾತ್ಮನೀಸತ್ಯ ನೀನೇಕೆ ಮರೆತೆ? ||

ಮಲಗು ಓ ಮನಸೇ, ಮಲಗು ಓ ಮನಸೇ;
ಶಿವನಲ್ಲಿ ಒಂದಾಗಿ, ನೀ ಆಗು ಕೂಸೇ!

ಪರಪಂಚ ಓಡೈತೆ ಗುರಿಯಿಲ್ಲದೆಡೆಗೆ
ನಿಂತಲ್ಲಿ ನೀನ್ನೋಡು ಅದರ ಚಡಪಡಿಕೆ
ಕೂತಲ್ಲಿ ಮುಖಮಾಡು ಪರಮಾತ್ಮನೆಡೆಗೆ
ನಡೆದಾಗ ನೀನು, ಆ ಬುದ್ಧನೆಡೆಗೆ
ಹಿಂತಿರುಗಿ ಬರುವೆ ಮರಳಿ ಮನೆಗೆ ||

ಮಲಗಣ್ಣ ಮನಸಣ್ಣ ನೀನಿಂದು ಇಲ್ಲಿ;
ಶಿವನಲ್ಲಿ ಒಂದಾಗಿ, ನೀನಾಗು ಕೂಸಿಲ್ಲಿ!

-ಕಾಮಿ

ಚುಕ್ಕಿ-ಚಂದ್ರ

ಆಗಸವೆಂಬ ಚಾದರ ಹೊದ್ದು
ಸೂರ್ಯ ಚಂದ್ರ ಮಲಗಿದ್ರು,
ಗುಮ್ಮನು ಬರ್ತಾನೆಂದಮ್ಮನ ಕಥೆಗೆ
ಮುಸುಕಾ ಮುಚಿಕೊಂಡಿದ್ರು ||೧||

ಗುಮ್ಮನ ಕಥೆಗೆ ಚಂದಿರ ಹೆದರಿ
ರಾತ್ರೀಯೆಲ್ಲಾ ಎದ್ದಿದ್ದ,
ಅಮ್ಮನ ಕಥೆಗೆ ಹೆದರದ ಸೂರ್ಯನು
ಗೊರಕೆ ಹೊಡೆದು ಮಲಗಿದ್ದ ||೨||

ಭಯದೀ ಚಡಪಡಿಸುತ್ತಾ ಚಂದಿರ
ಶಿವನಾ ನಾಮ ಜಪಿಸಿದ್ದ,
ಕನಸಿನ ಶಿವನು ಬಂದನು ಎದುರಿಗೆ
ಚುಕ್ಕಿಯ ಸ್ನೇಹಿತರಿತಿದ್ದ ||೩||

ಆಗಲಿನಿಂದ ಈಗಿನವರೆಗೂ
ಚುಕ್ಕಿ-ಚಂದ್ರ ಸ್ನೇಹಿತರು,
ಚಂದ್ರನ ಭಯವಾ ಓದಿಸಲೆಂದೇ
ಶಿವನು ಚುಕ್ಕಿಗಳ್ನಿತ್ತಿದ್ದು ||೪||

ಎದ್ದರೆ ಸೂರ್ಯನು ಯಾರಿವರೆಂದು
ಚುಕ್ಕಿಗಳ್ ತೋರಿಸಿ ಕೇಳುವನು,
ಶಿವನು ಕೊಟ್ಟ ಸ್ನೇಹಿತರೆಂದರೆ
ಅಮ್ಮನಿಗ್ ಚಾಡಿ ಹೇಳುವನು ||೫||

ಆಗಲೆ ಚಂದಿರ ಚುಕ್ಕಿಗಳ್ನೆಲ್ಲಾ
ಆಗಸದ್ಮೇಲೆ ಚೆಲ್ಲಿದ್ದು,
ಚಾದರ ತುಂಬಾ ಬಿಳಿಯಾ ಚಂದಿರ
ರಂಗಾವಲ್ಲೀ ಇಟ್ಟಿದ್ದು ||೬||

ಬೆಳಗಿನಜಾವ ಸೂರ್ಯನು ಎದ್ದ
ಉಷೆಯಾ ಕಿರಣಾ ಬೀರುತ್ತ,
ಕರಿಯಾ ಚಾದರ ನೀಲ್ಯಾಗಿತ್ತು
ಚುಕ್ಕಿಗಳ್ನ್ ಮರೆಮಾಚುತ್ತಾ ||೭||

ಒಂಟೀತನದಾ ಭಯವಾ ಓಡಿಸಿ
ಶಿವನೂ ಕೊಟ್ಟಾ ಉಡುಗೊರೆಯೂ,
ಕಷ್ಟದ ರಾತಿರಿ ಕಳೆಯಲು ಬೇಕು
ಗೆಳೆಯರು ಎಂಬಾ ಔಷಧಿಯು ||೮||

– ಕಾಮಿ

ಪ್ರೇಮ

ಮನಸಿನ ಹಾಳೆಗೆ ಪ್ರೇಮದ ನೀಲಿ
ಬರೆದೆನು ಹಚ್ಚಿ ಕವಿತೆಯಲಿ,
ನನ್ನಾ ಮನಸಿನ ಕೀಲಿಕೈಗಳು
ಕಳೆದಿವೆ ಗೆಳತಿ ಕತ್ತಲಲಿ||೧||
 
ದೊರೆತರೆ ನಿನಗೆ ಮರಲಿಸಬೇಡ
ನನ್ನ ಮನಸಿನ ಚಾವಿಯನು,
ಸಿಕ್ಕರೆತಾನೆ ಬಿಡುಗಡೆ ನಿನಗೆ
ಮನಸಿನ ಬಂಧಿ ನೀನಿನ್ನು||೨||
 
ದೇಹದ ತೂಕ ಹೆಚ್ಚಿರಲಾಗಿ
ಗಾಬರಿಗೊಂಡೆ ನಾನಲ್ಲಿ,
ನಿನ್ನಯ ಪ್ರೀತಿ ಮನಸಲಿ ತುಂಬಿರೆ
ಹೆಚ್ಚಲೆ ಬೇಕು ಗಾತ್ರದಲಿ||೩||
 
ಕಾಮದ ಮನಸಿನ ಮೋಹದ ಕಲ್ಮಷ
ಗುಡಿಸಲು ತಂದೇ ಕಸಪೊರಕೆ,
ಪ್ರೇಮದಿ ಒದರಿ, ಚೆಲುವಲಿ ದೂಡಿ
ತೆಗೆದೇ ಹಂದರ ಮನಸಾಕೆ||೪||
 
ನಲ್ಮೆಯ ಗೆಳತಿ, ಮನದಾ ಒಡತಿ
ಇಲ್ಲರೆ ನೀನು ಬಾಳಿನಲಿ,
ಚಿಲ್ಲರೆ ಜೀವನ ಯಾರಿಗೆ ಬೇಕು
ನಿಲ್ಲಲಿ ನನ್ನ ಉಸಿರಿಲ್ಲಿ||೫||
 
                                  -ಕಾಮಿ

ಓಟ

ಪುಕ್ಕಲ ಜಗದಾ ತಿಕ್ಕಲ ಜೀವನ
ಅಳುವಾ ಮನವಾ ನೋಡಣ್ಣ,
ಬಿದ್ದರೆ ಸೊರಗಿ ಗೆದ್ದರೆ ಬೆರಗಿ
ಆಡುವ ಮನಸನು ಕಾಣಣ್ಣ ||೧||
 
ಇರುವುದು ಬೇಡ, ಇರದುದು ಬೇಕು
ಎನುವುದು ಮನದಾ ಅಳುವಣ್ಣ,
ಎಲ್ಲ ಇದ್ದರು, ಏನೂ ಇಲ್ಲ
ಎನುವುದು ಮನಸಿನ ಸ್ಥಿತಿಯಣ್ಣ ||೨||
 
ಕಾರಣವಿಲ್ಲದೆ ಅಳುಕುವ ಬಳ್ಳಿ
ಮನದಾ ತುಮುಲ ನೋಡಿಲ್ಲಿ,
ಸಂತಸಗೊಂಡ ಮನಸಿನ ಕುಣಿತ
ಅದರಾ ಹುಚ್ಚು ಹಾಡಿನಲಿ ||೩||
 
ಹಾರುವ ಮನವೇ ಓದುವೆಯೆಲ್ಲಿ?
ನಿಂತು ಜಗವಾ ನೋಡಿಲ್ಲಿ,
ಜಗತಿನ ಚೆಲುವು ನೋಡುವ ಕಣ್ಣಲಿ
ಎನುವಾ ಮಾತು ದಿಟವಿಲ್ಲಿ ||೪||
 
ಜೀವನ ಕಣ್ಣಿಗೆ ಓಟದ ಪೊರೆಯು
ಮನಸಿನ ಚೆಲುವಿಗೆ ಜೀವನ ಹೊರೆಯು,
ಹೀಗಿರುವಾಗ ಹರಿವುದೆ ಸರಯೂ?
ಅಂತರಾಳದಾ ಆ ನದಿಯೂ ||೫||
 
ನಾಮುಂದೆಂದು ತಾಮುಂದೆಂದು
ಜಗವು ಕೂತಿದೆ ನಿರಶನದಿ,
ಸರದಿಯ ಸಾಲಲಿ ನಿಲುವುದು
ಮೌಡ್ಯ ಆಗುವುದೀಜಗದಿ ||೬||
 
ಮನಸಿನ ತಳದಲಿ ಇಟ್ಟನು ಸುಖವನು
ಹುಡುಕುವ ಕೆಲಸವ ನಮಗೇ ಬಿಟ್ಟನು,
ಅರಿಯೋ ಮನುಜ ಈ ನಿಜವನ್ನು
ಎನುತಾ ಶಿವನು ಕಾಮನ ಸುಟ್ಟನು ||೭||
 

                                             -ಕಾಮಿ

ಮುಸ್ಸಂಜೆ ಬದುಕು

ಸುಸ್ತಾದ ಬಡಜೀವ ಸಂಜೆಯಲ್ಲಿ
ನಡೆದಿರುವೆ ಗುರಿಯಿರದೆ ರಸ್ತೆಯಲ್ಲಿ,
ಭಾರದಾ ಮನಸಿನಾ ಜೊತೆಯಲ್ಲಿ
ನಗರದಾ ಗಡಿಬಿಡಿಯ ಪರಿವೆಲ್ಲಿ? ||೧||
 
ಸಂಜೆಯಾ ಸೂರ್ಯ ಮಂಜಾದ ಹೊತ್ತಲ್ಲಿ
ಮನಸಿನಾ ಸತ್ವ ಕಳುವಾಯ್ತು ಅಲ್ಲಿ,
ನಗರದಾ ಜೀವನದ ಭರದಲ್ಲಿ
ನನ್ನಯಾ ಅಸ್ತಿತ್ವ ಹರನವಾಯ್ತಿಲ್ಲಿ ||೨||
 
ಅವಸರದಾ ಓಡಾಟ ಸಾಕಾಯ್ತು ಇಲ್ಲಿ
ನನಗಾಗಿ ನಾನು ನಾನೆಲ್ಲಿ?
ಅಲ್ಲದಾ ಜೀವನದ ಬದುಕಿಲ್ಲಿ
ನನ್ನಯಾ ಚಿತ್ರದಲಿ ನಾನೆಲ್ಲಿ? ||೩||
 
ಕನಸಿನಾ ಲೋಕದಾ ಮಂಚದಲ್ಲಿ
ಮೈಮುರಿದು ಆಕಳಿಸಿ ಎದ್ದಲ್ಲಿ,
ಒಲವಿನಾ ಗೆಳತಿಯಾ ಪಕ್ಕೆಯಲ್ಲಿ
ನಲುಗಿದರೆ ಆಗುವುದು ಬದುಕು ಅಲ್ಲಿ ||೪||
 
ಮುಸ್ಸಂಜೆ ಸೂರ್ಯನಾ ಉಷೆಯಲ್ಲಿ
ದಿಟ್ಟನೆಯ ನೋಟ ಅನಂತದಲ್ಲಿ,
ಮೈಮರೆತು ಕುಳಿತಿರುವೆ ನಾನಲ್ಲಿ
ನಿಜವಾದ ಬದುಕು ಅಲ್ಲೈತೆ ನೋಡಲ್ಲಿ ||೫||
 
ಸೊಂಪನೆಯ ಅಪರಾಹ್ನ ನಿದ್ದೆಯಲ್ಲಿ
ಸೋಮಾರಿ ಸಂಜೆಯ ಕಾಫಿಯಲ್ಲಿ,
ಕಾಲ್ಚಾಚಿ ಮೈಮರೆತು ಕೂತಲ್ಲಿ
ಕನಸಿನಾ ಬದುಕು ಬಾಲ್ಯದಾ ನೆನಪಲ್ಲಿ ||೬||
 
ಪ್ರತಿನಿತ್ಯ ಬಡಿದಾಟ ನಗರದಲ್ಲಿ
ಒಂದೊಮ್ಮೆ ಮನಸಿನಾ ಏಕಾಂತದಲ್ಲಿ,
ಕಳೆದೋದೆ ಇನ್ನೊಮ್ಮೆ ಜನರಲ್ಲಿ
ಮತೊಮ್ಮೆ ನಾನಿಂದು ಕಾಮಿಯಾದೆ ಇಲ್ಲಿ ||೭||
 
-ಕಾಮಿ

ಮಾಯಾಮೃಗ

ಬಾಳೆಂಬ ಬರಿಬಾವಿ ನೀರಿಲ್ಲದಾಗ
ಮಿಂಚಂತೆ ನೀಬಂದೆ ತಳಸೀಳಿದಾಗ
ಒಲವೆಂಬ ಚಿಲುಮೆಯ ಹುಟ್ಟಾಯ್ತು ಆಗ ||
 
ಮಾಯೆಯಾ ಮೃಗದಂತೆ ನೀ ಅಂದು ಹೊಂಟಾಗ
ಮನವೆಂಬ ಸೀತೆಯು ಬೀಕೆಂದಳಾಗ,
ಲಕ್ಷಣನ ವಿವೇಕ ಮಾರೀಚನೆಂದಾಗ
ಈ ನನ್ನ ಮನವು ಕೆಲದಾಯ್ತಾಗ ||
 
ಮೋಹದಾ ಸನ್ಯಾಸಿ ಕೈಚಾಚಿ ನಿಂತಾಗ
ತಾಳದಾ ಮನವು ರೇಖೆದಾಟಿ ಬಂದಾಗ,
ಪ್ರೇಮದಾ ರಾವಣ ಗಹಗಹಿಸಿ ನಕ್ಕಾಗ
ಮನವೆಂಬ ಸೀತೆಯು ಬಂಧಿಯಾದಳಾಗ ||
 
ಮಾರೀಚಿ ನೀನೆಂದು ನನಗನಿಸಿದಾಗ
ಒದೆದೋಯ್ತು ಈ ಹೃದಯ ಅಲ್ಲಾಗ,
ಜಾನಕಿಯ ಮುಕ್ತಿ ನಿನ್ನಿಂದ ಯಾವಾಗ?
ನಿನ್ನೊಲುಮೆ ಜೀವ, ಈ ಹೃದಯ ನಿಂತಾಗ ||
 
ರಾವಣನ ಪ್ರೇಮಕ್ಕೆ ವಿಜಯವುಂಟೆ?
ಮಾರೀಚಿ ಮೋಹಕ್ಕೆ ಅಸ್ತಿತ್ವವುಂಟೆ?
– ಕಾಮಿ

ನಿರ್ವಾಣ

ಬಚಿಟ್ಟ ಕನಸಿನಾ ಬೆತ್ತಲೆಯ ರೂಪ,
ಬಿಚಿಟ್ಟಾಗ ಬಂತಲ್ಲ ಎಲ್ಲಾರ್ಗೂ ಕೋಪ,
ಎಲ್ಲಾರು ಮಾಡುವ ಕತ್ತಲೆಯ ಪಾಪ,
ಬಾಯ್ಮಾತಲ್ಲಿ ಹೇಳಿದ್ರೆ ಇಡ್ತಾರೆ ಶಾಪ!
 
ಮನಸಿನಾ ಒಳಗೊಂದು ಹೊರಗೊಂದು ಇಲ್ಲ,
ಮಧ್ಯದಾ ಜರಡಿಯಾ ಪರಮಾತ್ಮ ಬಲ್ಲ,
ಅನಿಸಿದ್ದ ಹೇಳ್ತೀನಿ ನೋಡ್ರಾ ಎಲ್ಲ,
ಸಭ್ಯತೆಯ ಎಲ್ಲೆ ನನಗೆ ಗೊತ್ತಿಲ್ಲ!
 
ಮದ್ಯದಾ ನಶೆಯಲ್ಲಿ ತೆಲ್ದಾಗ ನಾನು,
ನಾನಾಗಿ ನಾನಿರ್ತೀನಿ ಆಗ ನನ್ನೋಡು,
ಕಾಮದ ಕತ್ತಲಲಿ ಬೆತ್ತಲೆಯ ನಾನು,
ನಾನಾಗಿ ನಾನಿರ್ತೀನಿ ಆಗ ನನ್ನೋಡು,
ಸಾವಿನಾ ಸನಿಹಕ್ಕೆ ಬಂದಾಗ ನಾನು,
ನಾನಾಗಿ ನಾನಿರ್ತೀನಿ ಆಗ ನನ್ನೋಡು!
 
ಬಲ್ಲವರು ಹೇಳ್ತಾರೆ – ಮಧ್ಯದಿಂದ ನಾಶ,
ತಿಳಿದವರು ಹೇಳ್ತಾರೆ – ಕಾಮದಿಂದ ನಾಶ,
ಬಲ್ಲ-ತಿಳಿದವರು ಸತ್ತಾಗ – ಸ್ವನಾಶ,
 
ಹೇ ಕಾಮಿ! ನಾಶವಲ್ಲವೇ ನಿರ್ವಾಣ?
ನಿರ್ವಾನವಲ್ಲವೇ ಅವಿನಾಶ?
 
-ಕಾಮಿ